Monday, September 13, 2021

ಏನು ಜೀವನದರ್ಥ ?


ಏನು ಜೀವನದರ್ಥ ಏನು ಪ್ರಪಂಚಾರ್ಥ ?

ಏನು ಜೀವಪ್ರಪಂಚಗಳ ಸಂಬಂದ |

ಕಾಣದಿರುವುದೆನಾನುಮುಂಟೆ ಅದೇನು|

ಜ್ಞಾನ ಪ್ರಮಾಣವೇಂ -ಮಂಕುತಿಮ್ಮ ||

(ಕಾಣದೆ +ಇಲ್ಲಿ +ಇರುವುದು +ಏನಾನುಂ +ಉಂಟೆ )

ಈ   ನಮ್ಮ ಜೀವನಕ್ಕೆ ಏನಾದರೂ ಅರ್ಥವಿದೆಯೇ ?    ಈ  ಪ್ರಪಂಚಕ್ಕೆ ಏನಾದರೂ ಅರ್ಥ ಇದೆಯೇ ಈ ಜೀವಿಗಳ ಮತ್ತು ಪ್ರಪಂಚಗಳ ಸಂಬಂಧವೇನು ನಮಗೆ ಗೋಚರವಾಗದೆ  ಇರುವುದು ಇಲ್ಲಿ ಏನಾದರೂ ಇದೆಯೇ  ಹಾಗಿದ್ದರೆ ಏನದು ಅದು ನಮ್ಮ  ಜ್ಞಾನಶಕ್ತಿಗೆ ಮೀರಿದ್ದುದೋ ಏನು .

ದೇವರೆಂಬುದದೇನು ಕಗ್ಗತ್ತಲೆಯ ಗವಿಯೆ |

ನಾವರಿಯಲಾರದೆಲ್ಲದರೊಟ್ಟು ಹೆಸರೆ ||

ಕಾವನೊರ್ವನಿರಲ್ಕೆ ಜಗದ ಕಥೆಯೇಕಿಂತು |

ಸಾವು ಹುಟ್ಟುಗಳೇನು ಮಂಕುತಿಮ್ಮ||

(ದೇವರು +ಎಂಬುದು +ಅದು +ಏನು)(ನಾವು +ಅರಿಯಲಾರದ +ಎಲ್ಲದರ +ಒಟ್ಟು )(ಕಾವಂ +ಒರ್ವನ್ +ಇರಲ್ಕೆ)(ಜಗದ +ಕಥೆ+ಏಕೆ +ಇಂತು)

ದೇವರು ಎನ್ನುವುದು ಏನು ಅದು ಒಂದು ಕಗ್ಗತ್ತಲೆಯಿಂದ ಕೂಡಿದ ಗುಹೆಯೋ ಅಥವಾ ನಮಗೆ ತಿಳಿಯದೆ ಇರುವ ಎಲ್ಲವನ್ನು ಕಾಪಾಡುವನೊಬ್ಬನಿದ್ದರೂ ಈ ಜಗತ್ತಿನ ಕಥೆ ಹೀಗೇಕಿದೆ ಈ ಹುಟ್ಟು ಮತ್ತು ಸಾವುಗಳ ಅರಿವೇನು ಈ ರೀತಿಯ ಪ್ರಶ್ನೆಗಳು ಅರ್ಥವೇನು ಈ ರೀತಿಯ ಪ್ರಶ್ನೆಗಳು ಪ್ರತಿಯೊಬ್ಬ ಮನುಷ್ಯನನ್ನೂ ಒಂದಲ್ಲ  ಒಂದು ಸಲ ಕಾಡಿರುವುವಂತಹವೇ .

ಒಗಟೆಯೇನೀ ಸೃಷ್ಟಿಬಾಳಿನರ್ಥವದೇನು |

ಬಗೆದು ಬಿಡಿಸುವರಾರು ಸೋಜಿಗವನಿದನು ||

ಜಗವ ನಿರವಿಸಿದ ಕೈಯೊಂದಾದೊಡೇಕಿಂತು |

ಬಗೆ ಬಗೆಯ ಜೀವಗತಿ ಮಂಕುತಿಮ್ಮ ||

(ಒಗಟೆ +ಏನು +ಈ)(ಬಾಳಿನ +ಅರ್ಥವದು +ಏನು)(ಬಿಡಿಸುವರು +ಆರು )(ಸೋಜಿಗವನು+ಇದನು)(ಕೈ+ಒಂದು +ಆದೊಡೆ +ಏಕೆ +ಇಂತು)

ಈ  ಸೃಷ್ಟಿ ಎನ್ನುವುದು ಕಗ್ಗಂಟೋ ಏನು ಈ ಬಾಳಿನ ಏನಾದರೂ ಅರ್ಥವಿದೆಯೇ ಈ ಆಶ್ಚರ್ಯಕರವಾದ ಕಗ್ಗಂಟನ್ನು  ಯೋಚಿಸಿ  ಯಾರು ಬಿಡಿಸಬಲ್ಲರು  ಈ  ಜಗತ್ತನ್ನು  ಒಂದು ಕಾಣದ ಕೈ ನಿರ್ಮಿಸಿದೆ (ನಿರವಿಸಿದ)ಎಂದರೆ ಈ  ವಿಧ ವಿಧವಾದ ಜೀವಗತಿಗಳು ಏಕೆ ?

ಬದುಕಿಗಾರ್ ನಾಯಕರು ಏಕನೊ ಅನೇಕರೋ |

ವಿಧಿಯೊ ಪೌರುಷವೊ ಧರುಮವೊ ಅಂಧಬಲವೋ ||

ಕುದುರುವುದದೆಂತು ಈ ಯವ್ಯವಸ್ಥೆಯ ಪಾಡು ?

ಆದಿಗುದಿಯೆ ಗತಿಯೇನೊ ಮಂಕುತಿಮ್ಮ |

(ಬದುಕಿಗೆ+ಆರ್)(ಕುದುರುವುದು+ಅದು+ಎಂತು)(ಈ+ಅವ್ಯವಸ್ಥೆಯ)

ಈ ಬದುಕಿಗೆ   ನಾಯಕರು ಯಾರು ಒಬ್ಬನೇ ಒಬ್ಬನೋ ಅಥವಾ ಬಹು ಮಂದಿ ಇದ್ದಾರೆಯೋ ವಿಧಿಯೋ ಪುರುಷ ಪ್ರಯತ್ನವೋ ಧರ್ಮದ ಶಕ್ತಿಯೋ ಅಥವಾ ಒಂದು  ಅಂಧ ಬಲವೋ ಈ ಅವ್ಯವಸ್ಥೆಯ  ಪಾಡು ಸರಿಯಾಗುವುದು (ಕುದುರುವುದು )ಹೇಗೆ ಇಲ್ಲ ಈ  ತಳಮಳದಲ್ಲಿಯೇ (ಆದಿಗುದಿ)ನಾವು ಯಾವಾಗಲೂ ಇರಬೇಕೆ?

ಕ್ರಮವೊಂದು ಲಕ್ಷ್ಯವೊಂದುಂಟೇನು ಸೃಷ್ಟಿಯಲಿ| 

ಭ್ರಮಿಪುದೇನಾಗಾಗ ಕರ್ತೃವಿನ ಮನಸು ||

ಮಮತೆಯುಳ್ಳವನಾತನಾದೊಡೀ ಜೀವಗಳು |

ಶ್ರಮಪಡುವುವೇಕಿಂತು ಮಂಕುತಿಮ್ಮ||

(ಲಕ್ಷ್ಯ+ಒಂದು +ಉಂಟೇನು )(ಭ್ರಮಿಪುದು +ಏನು+ಆಗಾಗ )(ಮಮತೆ+ಉಳ್ಳವನು+ಆತನು+ಆದೊಡೆ+ಈ)(ಶ್ರಮಪಡುವುವು+ಏಕೆ+ಇಂತು)

ಈ   ಭಗವಂತನ ಸೃಷ್ಟಿಯಲ್ಲಿ ಒಂದು ಕ್ರಮ ಮತ್ತು ಗುರಿ ಏನಾದರೂ ಉಂಟೆ ಈ ಸೃಷ್ಟಿಕರ್ತನ ಮನಸ್ಸು ಆಗಾಗ ತಪ್ಪಾಗಿ  ಭಾವಿಸುತ್ತದೆಯೇನು ಮಮತೆಯುಳ್ಳವನಾದರೆ ಈ ಜೀವಿಗಳು ಏತಕ್ಕಾಗಿ ಈ ರೀತಿ ಶ್ರಮ ಪಡುತ್ತಿವೆ ?


ಏನು ಜೀವನದರ್ಥ ?

ಏನು ಜೀವನದರ್ಥ ಏನು ಪ್ರಪಂಚಾರ್ಥ ? ಏನು ಜೀವಪ್ರಪಂಚಗಳ ಸಂಬಂದ | ಕಾಣದಿರುವುದೆನಾನುಮುಂಟೆ ಅದೇನು| ಜ್ಞಾನ ಪ್ರಮಾಣವೇಂ -ಮಂಕುತಿಮ್ಮ || ೪ (ಕಾಣದೆ +ಇಲ್ಲಿ +ಇರುವುದು +...